Powered By Blogger

Monday 31 October 2016

ಭಾಷೆ

"ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು". "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ". ಬಹುಶಃ ಇಂತಹ ಮಾತುಗಳು ವರ್ಷಕ್ಕೊಂದು ಬಾರಿ ಮಾತ್ರ ನಮ್ಮ ಮನೆಗಳಲ್ಲೋ ,ಶಾಲೆಯ ಅಥವಾ ಫೇಸ್ಬುಕಿನ ಗೋಡೆಗಳಲ್ಲೋ ಕೇಳಿಬರುತ್ತದೆ.

ನಿಜವಾದ ಭಾಷಾ ಪ್ರೇಮ ಎಂದರೇನು ಭಾಷೆ ಯಾವುದೇ ಆಗಿರಲಿ ಅದರ ಮಹತ್ವವೇನು ಎಂದು ನಿಮಗೆ ಗೊತ್ತಿರದ ಭಾಷೆಯವರೊಂದಿಗೆ ವ್ಯವಹರಿಸುವಾಗ ಮಾತ್ರ ಅರಿವಾಗುತ್ತದೆ. ಹೊರದೇಶ ಅಥವಾ ಹೊರರಾಜ್ಯಗಳಿಗೆ ಹೋದಾಗ ನಮ್ಮ ಭಾಷೆ ಮಾತನಾಡುವವರು ಸಿಕ್ಕಿದರೆ ಅದೇನೋ ಖುಷಿ. ಮನೆಯಲ್ಲಿ ಇರುವಾಗ ದೂರದರ್ಶನದಲ್ಲೋ ಅಥವಾ ಇತರ ಮಾಧ್ಯಮದಲ್ಲೋ ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಸದಾ ನೋಡುತ್ತಿರುವ ವ್ಯಕ್ತಿ ಬೇರೆಡೆ ಹೋದಾಗ ಆತನಲ್ಲಿರುವ ಭಾಷಾಪ್ರೇಮ ಜಾಗರೂಕವಾಗುತ್ತದೆ. ಭಾರತೀಯರಾದ ನಮಗೆ ಕನಿಷ್ಟ ಎರಡು ಮೂರು ಭಾಷೆಗಳಾದರೂ ಬರುತ್ತವೆ. ಇದನ್ನು ಕಂಡು ಪರದೇಶದವರು ಹೊಗಳಿದಾಗ ಹೆಮ್ಮೆ ಅನಿಸುತ್ತದೆ.




ಹೊಸ ಭಾಷೆ ಕಲಿಯುವುದು ಅಷ್ಟು ಸುಲಭದ ಮಾತಲ್ಲ. ಅದು ಒಂದು ವಿಶಿಷ್ಟ ಕಲೆ. ಹಾಗಂತ ಕಷ್ಟ ಅಂದುಕೊಂಡು ಕಲಿಯದೆ ಕೂತರೆ ಮುಂದೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದೀತು. ಹೊಸ ಜಾಗಕ್ಕೆ ಅಥವಾ ದೇಶಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿತುಕೊಂಡರೆ ಅಲ್ಲಿನ ಸಂಸ್ಕೃತಿ, ಜನರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ತುಂಬಾ ಅನುಕೂಲವಾಗುತ್ತದೆ. ಮತ್ತು ಅಲ್ಲಿನ ಜನಗಳು ನಮ್ಮನ್ನು ಹೆಚ್ಚಿನ ಗೌರವದಿಂದ ಕಾಣುತ್ತಾರೆ. ಒಂದೊಂದು ಸಲ ನನಗನಿಸುವುದೇನೆಂದರೆ ಬಾಲ್ಯದಲ್ಲೇ ಜಗತ್ತೆಲ್ಲ ಸುತ್ತಿ ಎಲ್ಲ ಭಾಷೆಗಳನ್ನು ಕಲಿತುಕೊಂಡಿರುತ್ತಿದ್ದರೆ ಜೀವನ ಎಷ್ಟು ಸುಲಭವಾಗಿರುತ್ತಿತ್ತು ಎಂದು.

ಕನ್ನಡಿಗರು ಮತ್ತು ಭಾಷಾಭಿಮಾನದ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಆದರೆ ಹೊರಗಡೆ ಹೋದಾಗ ಏನಾದರೂ ಬೇರೆಯವರ ಬಗ್ಗೆ ಅವರ ಅರಿವಿಲ್ಲದೆ ಟಿಪ್ಪಣಿ ಮಾಡಬೇಕಾದಲ್ಲಿ ರನ್ನ ಪಂಪನೂ ಬಳಸದ ಶಬ್ದಕೋಶ ಜ್ಞಾಪಕಕ್ಕೆ ಬರುತ್ತದೆ! ಅನೇಕ ಬಾರಿ ಕೆಲವೊಂದು ಗುಟ್ಟಾದ ಮಾತುಗಳನ್ನು ಇತರರಿಗೆ ಗೊತ್ತಾಗದ ಹಾಗೆ ತಿಳಿಸಲು ಬಹುಭಾಷಾ ಪ್ರತಿಭೆ ನೆರವಾಗುತ್ತದೆ.

ಕೊನೆಯ ಮಾತು : ರಾಜ್ಯೋತ್ಸವ ಅಥವಾ ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರದೆ ಭಾಷಾಪ್ರೇಮ ಎಂದೆಂದಿಗೂ ಇರಬೇಕು. ಆದರೆ ಇತರ ಭಾಷೆಗಳಿಗೂ ಸಮಾನ ಗೌರವ ಕೊಡಬೇಕು ಎಂಬುದೇ ನನ್ನ ಅನಿಸಿಕೆ, ಆಶಯ !

No comments:

Post a Comment