"ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು". "ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ". ಬಹುಶಃ ಇಂತಹ ಮಾತುಗಳು ವರ್ಷಕ್ಕೊಂದು ಬಾರಿ ಮಾತ್ರ ನಮ್ಮ ಮನೆಗಳಲ್ಲೋ ,ಶಾಲೆಯ ಅಥವಾ ಫೇಸ್ಬುಕಿನ ಗೋಡೆಗಳಲ್ಲೋ ಕೇಳಿಬರುತ್ತದೆ.
ನಿಜವಾದ ಭಾಷಾ ಪ್ರೇಮ ಎಂದರೇನು ಭಾಷೆ ಯಾವುದೇ ಆಗಿರಲಿ ಅದರ ಮಹತ್ವವೇನು ಎಂದು ನಿಮಗೆ ಗೊತ್ತಿರದ ಭಾಷೆಯವರೊಂದಿಗೆ ವ್ಯವಹರಿಸುವಾಗ ಮಾತ್ರ ಅರಿವಾಗುತ್ತದೆ. ಹೊರದೇಶ ಅಥವಾ ಹೊರರಾಜ್ಯಗಳಿಗೆ ಹೋದಾಗ ನಮ್ಮ ಭಾಷೆ ಮಾತನಾಡುವವರು ಸಿಕ್ಕಿದರೆ ಅದೇನೋ ಖುಷಿ. ಮನೆಯಲ್ಲಿ ಇರುವಾಗ ದೂರದರ್ಶನದಲ್ಲೋ ಅಥವಾ ಇತರ ಮಾಧ್ಯಮದಲ್ಲೋ ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಸದಾ ನೋಡುತ್ತಿರುವ ವ್ಯಕ್ತಿ ಬೇರೆಡೆ ಹೋದಾಗ ಆತನಲ್ಲಿರುವ ಭಾಷಾಪ್ರೇಮ ಜಾಗರೂಕವಾಗುತ್ತದೆ. ಭಾರತೀಯರಾದ ನಮಗೆ ಕನಿಷ್ಟ ಎರಡು ಮೂರು ಭಾಷೆಗಳಾದರೂ ಬರುತ್ತವೆ. ಇದನ್ನು ಕಂಡು ಪರದೇಶದವರು ಹೊಗಳಿದಾಗ ಹೆಮ್ಮೆ ಅನಿಸುತ್ತದೆ.
ಹೊಸ ಭಾಷೆ ಕಲಿಯುವುದು ಅಷ್ಟು ಸುಲಭದ ಮಾತಲ್ಲ. ಅದು ಒಂದು ವಿಶಿಷ್ಟ ಕಲೆ. ಹಾಗಂತ ಕಷ್ಟ ಅಂದುಕೊಂಡು ಕಲಿಯದೆ ಕೂತರೆ ಮುಂದೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದೀತು. ಹೊಸ ಜಾಗಕ್ಕೆ ಅಥವಾ ದೇಶಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿತುಕೊಂಡರೆ ಅಲ್ಲಿನ ಸಂಸ್ಕೃತಿ, ಜನರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ತುಂಬಾ ಅನುಕೂಲವಾಗುತ್ತದೆ. ಮತ್ತು ಅಲ್ಲಿನ ಜನಗಳು ನಮ್ಮನ್ನು ಹೆಚ್ಚಿನ ಗೌರವದಿಂದ ಕಾಣುತ್ತಾರೆ. ಒಂದೊಂದು ಸಲ ನನಗನಿಸುವುದೇನೆಂದರೆ ಬಾಲ್ಯದಲ್ಲೇ ಜಗತ್ತೆಲ್ಲ ಸುತ್ತಿ ಎಲ್ಲ ಭಾಷೆಗಳನ್ನು ಕಲಿತುಕೊಂಡಿರುತ್ತಿದ್ದರೆ ಜೀವನ ಎಷ್ಟು ಸುಲಭವಾಗಿರುತ್ತಿತ್ತು ಎಂದು.
ಕನ್ನಡಿಗರು ಮತ್ತು ಭಾಷಾಭಿಮಾನದ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಆದರೆ ಹೊರಗಡೆ ಹೋದಾಗ ಏನಾದರೂ ಬೇರೆಯವರ ಬಗ್ಗೆ ಅವರ ಅರಿವಿಲ್ಲದೆ ಟಿಪ್ಪಣಿ ಮಾಡಬೇಕಾದಲ್ಲಿ ರನ್ನ ಪಂಪನೂ ಬಳಸದ ಶಬ್ದಕೋಶ ಜ್ಞಾಪಕಕ್ಕೆ ಬರುತ್ತದೆ! ಅನೇಕ ಬಾರಿ ಕೆಲವೊಂದು ಗುಟ್ಟಾದ ಮಾತುಗಳನ್ನು ಇತರರಿಗೆ ಗೊತ್ತಾಗದ ಹಾಗೆ ತಿಳಿಸಲು ಬಹುಭಾಷಾ ಪ್ರತಿಭೆ ನೆರವಾಗುತ್ತದೆ.
ಕೊನೆಯ ಮಾತು : ರಾಜ್ಯೋತ್ಸವ ಅಥವಾ ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರದೆ ಭಾಷಾಪ್ರೇಮ ಎಂದೆಂದಿಗೂ ಇರಬೇಕು. ಆದರೆ ಇತರ ಭಾಷೆಗಳಿಗೂ ಸಮಾನ ಗೌರವ ಕೊಡಬೇಕು ಎಂಬುದೇ ನನ್ನ ಅನಿಸಿಕೆ, ಆಶಯ !
ಚಿಗುರು
Monday, 31 October 2016
Monday, 18 January 2016
ಹೀಗೊಂದು ಆನೆ ಪುರಾಣ
ಕಳೆದ ಕೆಲವು ದಿನಗಳಿಂದ ನಮ್ಮ ಊರಿನ್ ಕಡೆ ಆನೆಯದ್ದೆ ಧ್ಯಾನ. “ಕಳೆಂಜ ದಲ್ಲಿ ಭಟ್ರ ಮನೆಗೆ ಆನೆ ಬಂದು ಇಡೀ ತೋಟ ಹುಡಿ ಮಾಡಿ ಹಾಕಿದೆ ಅಯ್ಯಾ “ ಅಂತ ನಮ್ಮ ಮನೆಯ ಆಳು ನಾಗಪ್ಪ ದಿನಾಲೂ ಬಂದು ಹೇಳೊವ್ನು.
ರಾತ್ರಿ ೮ ಗಂಟೆ ಆದಮೇಲೆ ನಾನು ಮನೆಯಿಂದ ಹೊರಗೆ
ಬರುದಿಲ್ಲ. ನಂಗೆ ಭಯ ಅಂತ ಅವಂದೊಂದು ಗೋಳು. ಇಡೀ ಜಗತ್ತಿನ ಭಯ ಅವ್ನಿಗೇ ಬಂದಿದೆ ಅಂತ
ಒಂದೊಂದ್ ಸಲ ನನಗೆ ಡೌಟ್ ಬರ್ತದೆ.
ಹಾಗಂತ ಈ ಆನೆ ಸುದ್ದಿ ನಮ್ಮೂರಿಗೆ ಹೊಸದೇನಲ್ಲ. ಒಂದೆರಡು ವರ್ಷದ ಹಿಂದೆ ನಮ್ಮ ಶಿಶಿಲ ದಲ್ಲಿ ಫುಲ್ ಆನೆ
ಕಾರಿಡಾರ್ ಆಗಿ ಇಡೀ ಊರೇ ಅಭಯಾರಣ್ಯ ಮಾಡುದಂತೆ ಅಂತ ಸುದ್ದಿ ಆಗಿತ್ತು. ಜಂಬರಗಳಿಗೆ ಹೋದಲ್ಲಿ ಎಲ್ಲ
ಅದೇ ಸುದ್ದಿ. ಎಂತದೋ ಆನೆ ಕಾರಿಡಾರ್ ಅಂತೇ ಮಾರ್ರೆ. ಸಾವಿನವ್ರಿಗೆ ಬೇರೆ ಕೆಲ್ಸ ಇಲ್ಲ, ನಾನಂತೂ ಕದೆಲುದಿಲ್ಲ, ಯಾವ ಆನೆ ಬಿಡ್ತಾರೆ ಬಿಡ್ಲಿ
ಅಂತ ನಮ್ಮಕೇಶವಣ್ಣನ ಬೊಬ್ಬೆ. ಅಲ್ಲ ಮಾರ್ರೆ, ಒಳ್ಳೆ ಪರಿಹಾರ ಧನ ಎಲ್ಲ ಕೊಟ್ರೆ
ಹೋಗುದು ಒಳ್ಳೆದಳ್ವಾ, ಸೆಂಟ್ರಲ್ ಗಾರ್ಮೆಂಟ್ ಪ್ಲಾನ್ ಆದ್ರಿಂದ ಸಿಗ್ಬಹುದು ಅಂತ ತಮ್ಮ ಹೇಳ್ತಿದ್ದ ಅಂತ ಆಚೆಮನೆ
ಕಿಶೋರಣ್ಣನ್ದು ಒಂದು ಅಡ್ವೈಸ್. ನಾನು ಆಸ್ತಿ ಮಾರಿ ಮಂಗ್ಳೂರಿಗೆ ಹೋಗುವ ಅಂತಿದ್ದೆ. ಇನ್ನೂ ಯಾರು
ಸಾ ಗಿರಾಕಿ ಬರುದಿಲ್ಲ ಅಂತ ಸೊನ್ನು ಮಾಮನಿಗೆ ಒಂದು ಟೆನ್ಷನ್ನು ! ನಾನೂ ಸಹ ಸ್ವಲ್ಪ ಗೂಗಲ್ ಗೀಗ್ಲ್ ಅಲ್ಲಿ ಇದ್ರ ಬಗ್ಗೆ
ಹುಡುಕಾಟ ಎಲ್ಲ ನಡಿಸಿದ್ದೆ. ಆ ಆನೆ ಯೋಜನೆ ಸುದ್ದಿ ಇನ್ನೊಮ್ಮೆ ಪೇಪರ್ ಅಲ್ಲಿ ಬಂದಿದೆ ಅಂತ
ಅಮ್ಮ ಫೋನಲ್ಲಿ ಒಂದೊಂದ್ ಸಲ ಹೇಳ್ತಿದ್ರು. ಇರ್ಲಿ ನೋಡುವ ಅಂತ ನಾನು ಸುಮ್ನಿದ್ದೆ.
"ಅಲ್ಲಿ ಗೋಖಲೆಯವ್ರ ಮನೆಗೆ ಬಂದು
ಮನುಷ್ಯರ ಹಾಗೆ ಗೇಟು ತೆಗ್ದು ಸೀದಾ ಹೋಯ್ತಂತೆ., ಮತ್ತೆ ಮೊನ್ನೆ ಮಾರ್ಗದ ಮನೆಯವ್ರು ಕಾರ್ ಅಲ್ಲಿ ಬರುವಾಗ ಮುಂದೆ ಸಿಕ್ಕಿತಂತೆ. ಅವ್ರು
ಶಬ್ದ ಮಾಡದೆ ಲೈಟ್ ತೆಗ್ದು ಸೀದಾ ಬಂದ್ರಂತೆ ಅಂತ ಸುದ್ದಿ. ನಾವು ಮೊನ್ನೆ ಕೊಕ್ಕಡಕ್ಕೆ ರಿಕ್ಷಾದಲ್ಲಿ ಹೋಗುವಾಗ
ಲದ್ದಿ ಇಂದ ಹೊಗೆ ಬರ್ತಿತ್ತು. ಆಗ್ಲೇ ಹಾಕಿ ಹೋದದ್ದಷ್ಟೆ" ಅಂತ ನಾಗಪ್ಪಂದು ಸಾ ಒಂದು
ಕಥೆ. ಆವ್ನದ್ದು ದಿನಾಲೂ ಒಂದೊಂದು ಕಥೆ
ಇರ್ತಿತ್ತು. ಇದು ಪೇಪರ್ ಅಲ್ಲಿ ಸಾ ಬಂದಿತ್ತು.
ರೋಡ್ ಮೇಲೆ ಕಪ್ಪು ಎಂತಾದ್ರೂ ನೋಡಿದ್ರೆ ಅದು ಆನೆ ಲದ್ಡಿಯೆ ಅಂತ ಜನ್ರಿಗೆ ಫುಲ್ ಡೌಟ್.
ಅವತ್ತೊಂದಿನ ಪುತ್ತೂರಿಗೆ ನಮ್ಮ ಫ್ರೆಂಡ್ ಮನೆಗೆ ಹೋದಾಗ, ನಿಕ್ಲೆನ ಊರುಡು ಭಯಂಕರ ಆನೆಗೆ ಮಾರ್ರೆ(ನಿಮ್ಮ ಊರಿನಲ್ಲಿ ಭಾರೀ ಆನೆ ಅಂತೆ) ಅಂತ
ಕೇಳ್ತಿದ್ರು.
ನನಗೆ ಸಾ ಇದ್ರಿಂದ ತುಂಬಾ ತೊಂದ್ರೆ ಆಯ್ತು. ರಾತ್ರಿ ಬೆಂಗ್ಳೂರಿಗೆ ಬಸ್
ಹಿಡೀಲಿಕ್ಕೆ ಕೊಕ್ಕಡಕ್ಕೆ ಹೋಗ್ಬೇಕಾದ್ರೆ ರಿಕ್ಷಾದವ್ರು ಬರ್ತಾ ಇರ್ಲಿಲ್ಲ. ೮ ಗಂಟೆ ಆಯಿಬುಕ್ಕ ಬರ್ಪುಜಿ ಅಣ್ಣೆರೆ (೮ ಗಂಟೆ ಆದಮೇಲೆ ನಾವು ಬರುದಿಲ್ಲ) ಅಂತ
ಅವ್ರದ್ದು ಅಳು. ಅವ್ರು ಹೇಳುದು ಸಾ ಸರಿ ನೋಡು. ಇರುದು ಒಂದು ಜೀವ ಅಲ್ವಾ ಅಂತ ಅಮ್ಮ ಸ್ವಲ್ಪ
ಉಪದೇಶ ಮಾಡಿದ್ರು.
ಇಷ್ಟು ಸುದ್ದಿ ಆದ್ರೆ ಸಾ ಒಂದು ಸರ್ತಿ ಕೂಡ ಆ ಆನೆ ನಮಗೆ ಕಾಣ್ಲಿಕ್ಕೆ ಸಿಕ್ಲೇ ಇಲ್ಲ .ಹೀಗೆ ಒಂದು ೫-೬ ತಿಂಗ್ಳು ಇದ್ದ ಆನೆ ಒಮ್ಮೆಲೆ ನಾಪತ್ತೆ
ಆಗಿತ್ತು. ಮೊನ್ನೆ ಚಳಿಗಾಲ ಶುರು ಆದಾಗ ಮತ್ತೆ ಅದಕ್ಕೆ ನಮ್ಮೆಲ್ರ ನೆನಪಾಯ್ತೋ ಏನೋ.
ಶಿಶಿಲದಲ್ಲಿ ಆನೆ ಉಂಟಂತೆ ಅಂತ ಸುದ್ದಿ ಮತ್ತೆ. ನಮ್ಮ ನಾಗಪ್ಪನಿಗೆ ಭಯವೋ ಭಯ. ಮೊನ್ನೆ ಅಪ್ಪ
ಅಮ್ಮನ ಒಟ್ಟಿಗೆ ಗೋಕರ್ಣಕ್ಕೆ ಹೋಗಿದ್ದಾಗ ಮನೆ ಕಾಯ್ಲಿಕ್ಕೆ ಅಂತ ಅವ ಬಂದಿದ್ದ ಅವನ
ಧರ್ಮಪತ್ನಿ ಶಾರದೆಯ ಒಟ್ಟಿಗೆ. ನಾವು ವಾಪಸ್ ಬರುವಾಗ ರಾತ್ರಿ ೧೧ ಗಂಟೆ. ಜೀಪಿನಿಂದ ಇಳಿದ ಕೂಡ್ಲೆ ಶಾರದೆ “ಆವಾಗಿಂದ ಪರ ಪರ ಅಂತ ತೋಟದಲ್ಲಿ ಶಬ್ದ, ನಾವು ನೀವು ಹಾರ್ನ್ ಮಾಡದೆ ಗೇಟ್
ತೆಗಿಯುದಿಲ್ಲ ಅಂತ ಇದ್ದೆವು”
ಅಂದ್ಲು. ನಾವು ಏನು ಭೂತ ಗೀತದ ಭ್ರಮೆ ಏನಾದ್ರೂ ಆಯ್ತಾ ಅಂತ ಕೇಳಿದ್ವಿ. ಅಲ್ಲಯ್ಯ, ಅದು ಇಲ್ಲಿ ಉಂಟು ತೋಟಕ್ಕೆ ಬಂದಿತ್ತು, ಮೂರು ಇತ್ತಂತೆ. ನಾವು ಶಬ್ದ ಕೇಳಿ ಓಡಿ ಹೋದೆವು ಅಂತ ಚೂರು ಭಯದಲ್ಲಿ ಹೇಳಿದ್ಲು. "ಓಹ್ ಆನೆಯಾ?ಮೊನ್ನೆ ಅಷ್ಟೇ ಜೆಸಿಬಿ ತಂದು ರೋಡ್
ಮಾಡಿದ್ವಿ , ಮೊದ್ಲೇ ಗೊತ್ತಿದ್ರೆ
ಅದ್ರಿಂದ್ಲೆ ಫ್ರೀ ಆಗಿ ಮಾಡಿಸ್ಬಹುದಿತ್ತು" ಅಂತ ಒಂದು ಸಣ್ಣ ಜೋಕೆ ಬಿಟ್ಟೆ. ನಿಮಗೆ
ತಮಾಷೆ ಸಣ್ಣಯ್ಯ ನಮಗೆ ಹೆದ್ರಿ ಜೀವ ಇಲ್ಲ ಅಂತ ಶಾರದೆ. ಗಣಪತಿಗೆ ನಾವು ಪೂಜೆ ಮಾಡಿದ್ದು ಇಷ್ಟ
ಆಗಿ ಇಲ್ಲಿಗೆ ಬಂದಿದ್ದಾರೆ ಅಂತ ಅಮ್ಮಂದೊಂದು ಮಾತು. ಮರುದಿನ ತೋಟಕ್ಕೆ ಹೋಗಿ ನೋಡಿದ್ರೆ ಆನೆದ್ದು ಹೆಜ್ಜೆ ಇರ್ಲಿ ಒಂದು ರೋಮ ಸಾ ಇರ್ಲಿಲ್ಲ. ಒಟ್ಟಾರೆ ಎಂತದೋ ಏನೋ, ಒಂದು ಆನೆ ಅಂತೂ ಒಳ್ಳೆ ಭಯ ಬೀಳಿಸಿ ಬಿಟ್ಟಿದೆ. ಸತ್ಯ ಅದು ಎಲ್ಲಿ ಉಂಟು ಎಂತ ಕಥೆ ಅಂತ
ದೇವ್ರಿಗೆ ಗೊತ್ತು.
Subscribe to:
Posts (Atom)